Thursday, 6 September 2018

ಅಧ್ಯಾಯ - 03 : ಶ್ಲೋಕ – 40

ಇಂದ್ರಿಯಾಣಿ  ಮನೋ ಬುದ್ಧಿರಸ್ಯಾಧಿಷ್ಠಾನಮುಚ್ಯತೇ ।ಏತೈರ್ವಿಮೋಹಯತ್ಯೇಷ ಜ್ಞಾನಮಾವೃತ್ಯ ದೇಹಿನಮ್ ॥೪೦॥

ಇಂದ್ರಿಯಾಣಿ  ಮನಃ ಬುದ್ಧಿಃ ಅಸ್ಯ ಅಧಿಷ್ಠಾನಮ್  ಉಚ್ಯತೇ   
ಎತೈಃ ವಿಮೋಹಯತಿ ಏಷಃ  ಜ್ಞಾನಮ್ ಆವೃತ್ಯ ದೇಹಿನಮ್-

ಇಂದ್ರಿಯಗಳು, ಮನಸ್ಸು, ಬುದ್ಧಿ ಈ ಕಾಮದ ನೆಲೆದಾಣಗಳು. ಇವುಗಳ ಮೂಲಕ ಇದು ತಿಳಿವನ್ನು ಕವಿದು ಸಾಧಕನನ್ನು ಕಂಗೆಡಿಸುತ್ತದೆ. 

ನಮ್ಮ ಬಯಕೆಗಳ ಸರಮಾಲೆ ಮೊದಲು ಬಂದು ಕೂರುವುದು ನಮ್ಮ ಇಂದ್ರಿಯದಲ್ಲಿ. ಕಣ್ಣಿಗೆ ನೋಡುವ, ಕಿವಿಗೆ ಕೇಳುವ, ಮೂಗಿಗೆ ಮೂಸುವ, ಮೈಗೆ ಮುಟ್ಟುವ-ಹೀಗೆ ಒಂದೊಂದು ಬಯಕೆ ಒಂದೊಂದು ರೂಪದಲ್ಲಿ ಒಂದೊಂದು ಇಂದ್ರಿಯದಲ್ಲಿ ಬಂದು ಕೂರುತ್ತದೆ. ಅಲ್ಲಿ ನಾವು ಅದನ್ನು ನಿಗ್ರಹಿಸದೇ ಇದ್ದರೆ  ಅದು ನಮ್ಮ ಮನಸ್ಸನ್ನು ಆಕ್ರಮಿಸುತ್ತದೆ.  ಅಲ್ಲೂ ನಾವು ಸಡಿಲಗೊಳಿಸಿದರೆ ಅದು ಮುಂದೆ ನಮ್ಮ ಬುದ್ಧಿಯನ್ನು ಆಕ್ರಮಿಸಿಬಿಡುತ್ತದೆ.  ಹೀಗೆ ಅಂಗಳದ(ಇಂದ್ರಿಯ) ಈ ಶತ್ರುವನ್ನು ಮೊಗಸಾಲೆ(ಮನಸ್ಸು)ಗೆ ಕರೆದು, ನಂತರ ನಮ್ಮ ನಡು ಮನೆಯಲ್ಲಿ(ಬುದ್ಧಿ) ಕುಳ್ಳಿರಿಸಿದಂತೆ.  ಒಮ್ಮೆ ಈ ಶತ್ರು ನಮ್ಮ ಬುದ್ಧಿಯನ್ನು ಆಕ್ರಮಿಸಿದರೆ ಮುಂದೆ ಅದನ್ನು ತೊಡೆದು ಹಾಕುವುದು ತುಂಬಾ ಕಷ್ಟ. ಈ ಸ್ಥಿತಿಯಲ್ಲಿ ಬಯಕೆ ಎನ್ನುವುದು ಸಿದ್ಧಾಂತವಾಗಿ ನಮ್ಮೊಳಗಿದ್ದು ನಮ್ಮನ್ನೇ ಆಳುವುದಕ್ಕೆ ಆರಂಭಿಸುತ್ತದೆ. ಇದರಿಂದ ಕಾಮನೆ ಎನ್ನುವುದು ನಮ್ಮ ಜೀವನ ಧರ್ಮವಾಗುತ್ತದೆ. ಉದಾಹರಣೆಗೆ ಒಂದು ಸಂಗತಿ ನಮ್ಮ ಕಿವಿ ಮೇಲೆ ಬೀಳುತ್ತದೆ. ನಾವು ಆ ವಿಷಯದಿಂದ ನಮಗೇನು ಉಪಯೋಗ ಆ ಬಗ್ಗೆ ಗಮನ ಏಕೆ ಹರಿಸಬೇಕು ಎಂದು ಯೋಚಿಸುವುದಿಲ್ಲ, ಅದನ್ನು ಬಿಟ್ಟು ಕೇಳಿದ ವಿಷಯವನ್ನು ನೋಡಲು ಹಂಬಲಿಸುತ್ತೇವೆ. ನೋಡಿದ ಮೇಲೆ ಮುಟ್ಟಬೇಕು(ತಿನ್ನಬೇಕು ಮೂಸಬೇಕು ಇತ್ಯಾದಿ) ಎನ್ನುವ ಆಸೆ!  ಹೀಗೆ ನಾವು ನಮ್ಮೆಲ್ಲಾ ಇಂದ್ರಿಯದಲ್ಲಿ ಈ ಕಾಮನೆ ಎನ್ನುವ  ವೈರಿಗೆ ಪ್ರೋತ್ಸಾಹ ಕೊಡುತ್ತೇವೆ. ಆಗ ಅದು ನಿಧಾನವಾಗಿ  ನಮ್ಮ ಮನಸ್ಸನ್ನು ಆಕ್ರಮಿಸುತ್ತದೆ. ಮನಸ್ಸು ನಿರಂತರವಾಗಿ ಆ ವಿಷಯದ ಬಗ್ಗೆ ಯೋಚಿಸಲಾರಂಭಿಸುತ್ತದೆ. ಮನಸ್ಸು 'ಅದು ನನ್ನದಾಗಬೇಕು,ನನ್ನದೇ ಆಗಬೇಕು (Possessiveness)', ಎಂದು ಯೋಚಿಸುತ್ತಿದೆ ಎಂದರೆ ಈ ವೈರಿ ಮನಸ್ಸನ್ನು ಆಕ್ರಮಿಸಿದೆ ಎಂದರ್ಥ. ಇಲ್ಲಿಂದ ಮುಂದೆ ಬುದ್ಧಿ; 'ಅದನ್ನು ಬಿಟ್ಟು ನಾನಿರಲಾರೆ, ಏನೇ ಆಗಲಿ ನಾನು ಅದನ್ನು ಪಡೆಯಲೇ ಬೇಕು' ಇತ್ಯಾದಿ ಯೋಚನೆಗಳು, ಇದು ಕಾಮನೆ ನಮ್ಮ ಬುದ್ಧಿಯನ್ನು ಆಕ್ರಮಿಸುವ ಸೂಚನೆ. ಇದು ಸರ್ವನಾಶದ ಮುನ್ಸೂಚನೆ. ಹೀಗೆ ಜ್ಞಾನಕ್ಕೆ ವಿಭ್ರಮೆಯಾಗಿರುವ ಈ ಮೂರು ಜಾಗದಲ್ಲಿ ಕೂತು ಜ್ಞಾನಕ್ಕೆ ಪರದೆಯಾಗಿ ನಿಲ್ಲುತ್ತದೆ ಈ ನಮ್ಮ ವೈರಿ.

ಇಲ್ಲಿ 'ದೇಹಿನಮ್' ಎನ್ನುವ ಪದ ಬಳಕೆಯಾಗಿದೆ- ನಮ್ಮ ದೇಹ ಎನ್ನುವುದು ಜ್ಞಾನದ ಮೂಲಕ ನಮ್ಮನ್ನು  ಎತ್ತರಕ್ಕೆ ಕೊಂಡೊಯ್ಯುವ ಸಾಧನ, ಆದರೆ ಕಾಮನೆ ಎನ್ನುವ ವೈರಿಯ ಸಂಗ ಮಾಡಿದಾಗ ಅದು ನಮ್ಮನ್ನು ಅಧಃಪಾತಕ್ಕೆ ತಳ್ಳುವ ಸಾಧನವಾಗುತ್ತದೆ. ಇದು ಈ ಪದದ ಹಿಂದಿರುವ ಭಾವಾರ್ಥ.

ಹೀಗೆ ನಮ್ಮ ವೈರಿ ಯಾರು, ಆತ ಇರುವ ಸ್ಥಾನ ಯಾವುದು ಹಾಗು ಆತ ಹೇಗೆ ನಮ್ಮನ್ನು ಆಕ್ರಮಿಸುತ್ತಾನೆ ಎನ್ನುವ ವಿವರಣೆಯನ್ನು ಕೊಟ್ಟ ಕೃಷ್ಣ, ಈ ವೈರಿಯನ್ನು ಗೆದೆಯುವ ಪರಿಯನ್ನು ಮುಂದೆ ವಿವರಿಸುತ್ತಾನೆ.

ಕೃಪೆ:  ಪದ್ಮಶ್ರೀ  🙏 ಶ್ರೀ ಬನ್ನಂಜೆ ಗೋವಿಂದಾಚಾರ್ಯರು🙏

इन्द्रियाणि मनो बुद्धिरस्याधिष्ठानमुच्यते।
एतैर्विमोहयत्येष ज्ञानमावृत्य देहिनम्‌॥

इन्द्रियाँ, मन और बुद्धि- ये सब इसके वासस्थान कहे जाते हैं। यह काम इन मन, बुद्धि और इन्द्रियों द्वारा ही ज्ञान को आच्छादित करके जीवात्मा को मोहित करता है।
॥40॥

Indriyaani mano buddhir asyaadhishthaanam uchyate;
Etair vimohayatyesha jnaanam aavritya dehinam.

The senses, mind and intellect are said to be its seat;
through these it deludes theembodied by veiling his wisdom.

No comments:

Post a Comment